ಮರಿಯಪ್ಪ, ಟಿ - 
ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಗಾಂಧೀವಾದಿ. 1904 ಜೂನ್ 4ರಂದು ನಾಗಮಂಗಲ ತಾಲ್ಲೂಕಿನ ಕಳ್ಳನಕೆರೆಯಲ್ಲಿ (ಇಂದು ಬೀರೇಶ್ವರಪುರ ಎಂದು ಹೆಸರಾಗಿದೆ) ಸಾಮಾನ್ಯ ಮನೆತನವೊಂದರಲ್ಲಿ ಜನಿಸಿದರು ತಂದೆ ಮಾರಿಯೋಮೇಸ್ತ್ರಿ, ತಾಯಿ ಹೊಂಬಾಳಮ್ಮ. ಮರಿಯಪ್ಪನವರ ಆರಂಭದ ವ್ಯಾಸಂಗ ನಾಗಮಂಗಲದ ಎಂ.ವಿ ಸ್ಕೂಲಿನಲ್ಲಿ ನಡೆಯಿತು. ಆಗಿನ ಎಲ್. ಎಸ್. ಪರೀಕ್ಷೆಯನ್ನು ಶ್ರೀರಂಗಪಟ್ಟಣದಲ್ಲಿ ತೆಗೆದುಕೊಂಡರು. ಪ್ರೌಢಶಾಲೆ ಮತ್ತು ಇಂಟರ್‍ಮಿಡಿಯೇಟ್ ವ್ಯಾಸಂಗವನ್ನು ಮೈಸೂರಿನಲ್ಲೇ ಮುಗಿಸಿದ ಅನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗಮಾಡಿ ಬಿ.ಎ. ಪದವಿ ಪಡೆದರು. ಅಮಲ್ದಾರ್ ಕೆಲಸಕ್ಕೆ ಸೇರಿ ತಮ್ಮ ವೃತ್ತಿಜೀವನ ಆರಂಭಿಸಿದರಾದರೂ ಸ್ವತಂತ್ರವಾಗಿ ಬದುಕಬೇಕೆಂಬ ಇಚ್ಛೆಯಿಂದ ಆ ಕೆಲಸ ಬಿಟ್ಟು ಲಾ ಓದಲು ಪುಣೆಗೆ ತೆರಳಿದರು. ಅಲ್ಲಿ ಲಾ ಪದವಿ ಪಡೆದು ಹಿಂತಿರುಗಿ ಮೈಸೂರಿನಲ್ಲಿ ಎಚ್. ಸಿ. ದಾಸಪ್ಪನವರ ಬಳಿ ವಕೀಲವೃತ್ತಿ ಆರಂಭಿಸಿದರು. ಆ ವೃತ್ತಿಯಲ್ಲಿ ಒಳ್ಳೆಯ ಪರಿಶ್ರಮ ಸಂಪಾದಿಸಿ ಕೊಂಡರು. ತಮ್ಮ ಬಳಿ ಬಂದ ಅನೇಕ ಮೊಕದ್ದಮೆಗಳನ್ನು ಇವರು ಮನೆಯಲ್ಲಿಯೇ ಇತ್ಯರ್ಥ ಮಾಡಿ ಕಳುಹಿಸುತ್ತಿದ್ದರು. ಕೈಮೀರಿದವನ್ನು ಮಾತ್ರ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. 

	ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಇವರು 1942 ಮತ್ತು 1947ರಲ್ಲಿ ಎರಡು ಬಾರಿ ಕಾರಾಗೃಹವಾಸ ಅನುಭವಿಸಿದರು. ಸ್ವಾತಂತ್ರ್ಯನಂತರ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಮೈಸೂರು ಪುರಸಭೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸುಮಾರು 19 ವರ್ಷಗಳ ಕಾಲ ರಾಜ್ಯವಿಧಾನ ಸಭೆ ಸದಸ್ಯರಾಗಿದ್ದರು. ಸಿದ್ದವನಹಳ್ಳಿ ನಿಜಲಿಂಗಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ಮರಿಯಪ್ಪನವರು ಅವರ ಮಂತ್ರಿ ಮಂಡಲದಲ್ಲಿ ಹಣಕಾಸು ಮತ್ತು ಸಾರಿಗೆ ಸಚಿವರಾಗಿದ್ದರು. ಇವರು ಸಾರಿಗೆ ಸಚಿವರಾಗಿದ್ದಾಗಲೇ ಬಸ್ ಮಾರ್ಗ ರಾಷ್ಟ್ರೀಕರಣಗೊಂಡು ಸರ್ಕಾರಿ ಬಸ್ ಸಂಚರಿಸಲು ಆರಂಭಿಸಿದ್ದು. ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಒಳ್ಳೆಯ ಬುನಾದಿ ಹಾಕಿದ ಇವರು ತಾಲ್ಲೂಕು ಮತ್ತು ಜಿಲ್ಲಾಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಿದರು.

	ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಯ ಬಗ್ಗೆ ಆಸಕ್ತಿ ತಾಳಿದ್ದ ಇವರು ಅರ್ಥಸಚಿವರಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿದ್ದ ಕನ್ನಡ-ಕನ್ನಡ ನಿಘಂಟು ಕೆಲಸಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಒದಗಿಸಿ ಆ ಯೋಜನೆಯನ್ನು ಪ್ರೋತ್ಸಾಹಿಸಿದರು. 1964 ಅಕ್ಟೋಬರ್ 2ರಂದು ತೀರಿಕೊಂಡರು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ